ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಅರ್ಥಧಾರಿ ಪಾತ್ರಧಾರಿ ಸಾಹಿತಿ : ಸೇರಾಜೆ ಸೀತಾರಾಮ ಭಟ್ಟರು

ಲೇಖಕರು : ಹಿರಣ್ಯ ವೆಂಕಟೇಶ್ವರ ಭಟ್ಟ
ಸೋಮವಾರ, ಸೆಪ್ಟೆ೦ಬರ್ 7 , 2015

ಕೆಲವರು ತಮ್ಮ ಅನನ್ಯ ಪರಿಶ್ರಮದಿಂದ ಅದ್ಭುತ ಕಲಾವಿದರೋ ಸಾಹಿತಿಗಳ್ಳೋ ಆಗಿರುತ್ತಾರೆ. ಇನ್ನು ಕೆಲವರಿಗೆ ಕಲೆ, ಸಾಹಿತ್ಯ ಜನ್ಮತಃ ಅಂಟಿಕೊಂಡಿರುತ್ತದೆ. ಆದರೆ ಇವುಗಳೆರಡೂ ಆಗಿರುವ ವಿರಳಾತಿವಿರಳ ವ್ಯಕ್ತಿಗಳಲ್ಲಿ ಸೇರಾಜೆ ಸೀತಾರಾಮ ಭಟ್ಟರು ಒಬ್ಬರು.

ಬಾಲ್ಯ ಹಾಗೂ ಶಿಕ್ಷಣ

ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದಲ್ಲಿ ಸೇರಾಜೆಯೆಂಬುದು ಒಂದು ಪುಟ್ಟ ಪ್ರದೇಶ. ಇಲ್ಲಿ 20-10-1948ರಂದು ಜನಿಸಿದವರು ಸೀತಾರಾಮ ಭಟ್ಟರು. ತಂದೆ ಸೇರಾಜೆ ನಾರಾಯಣ ಭಟ್ಟರು ಮತ್ತು ತಾಯಿ ಶಂಕರಿ ಅಮ್ಮ. ಈ ದಂಪತಿಯ ಆರು ಜನ ಮಕ್ಕಳಲ್ಲಿ ಐದನೆಯವರು ಸೀತಾರಾಮ ಭಟ್ಟರು.

ಊರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿ, ಉಡುಪಿಯಲ್ಲಿ ಬಿ.ಎಸ್‌ಸಿ., ಎಲ್‌ಎಲ್‌.ಬಿ. ಪದವೀಧರರಾದ ಇವರು ಬೆಂಗಳೂರಿನಲ್ಲಿ ಉದ್ಯೋಗವನ್ನು ಮಾಡಿ ಅನಂತರ ಮಂಗಳೂರಿನಲ್ಲಿ ಉದ್ಯೋಗನಿರತರಾಗಿ ನಿವೃತ್ತಿಯನ್ನು ಹೊಂದಿದ ಬಳಿಕ ಸುರತ್ಕಲ್ಲಿನಲ್ಲಿ ವಾಸಿಸುತ್ತಿದ್ದಾರೆ. ಇವರು ಓರ್ವ ಪುತ್ರ ಮತ್ತು ಓರ್ವ ಪುತ್ರಿಯನ್ನು ಹೊಂದಿದ್ದು, ಸಂತೃಪ್ತ ಸಂಸಾರಿಯೆನಿಸಿದ್ದಾರೆ.

ಪದ್ಯಾಣ - ಕುರಿಯ ಕುಟುಂಬಗಳ ಕುಡಿ

ಸೇರಾಜೆಯೆಂಬ ಮನೆಯು ಪದ್ಯಾಣ ಕುಟುಂಬದ ಒಂದು ಶಾಖೆಯಾಗಿದೆ. ಪೆರ್ವೋಡಿ ಮತ್ತು ಕುರಿಯ ಮನೆತನಗಳ ಹತ್ತಿರದ ಸಂಬಂಧವನ್ನು ಹೊಂದಿದೆ. ಪರಿಸರ ಮತ್ತು ಬಂಧುಗಳ ಪ್ರಭಾವದಿಂದ ಸೀತಾರಾಮ ಭಟ್ಟರು ಯಕ್ಷಗಾನ ಕಲಾವಿದರಾಗಿಯೇ ಬೆಳೆದರು. ವೇಷಗಾರಿಕೆ ಮತ್ತು ಅರ್ಥಗಾರಿಕೆಯಲ್ಲಿ ಪಳಗಿದರು. ಪ್ರವಚನ ನಿಪುಣರೂ ಆದರು. ""ಯಕ್ಷಗಾನದ ಅನುಗ್ರಹೀತ ವೇಷಧಾರಿಯಾಗಿಯೂ ಅರ್ಥಧಾರಿಯಾಗಿಯೂ 1970ರ ದಶಕದಲ್ಲೇ ಪ್ರತಿಷ್ಠೆಯನ್ನು ಗಳಿಸಿದ್ದ ಸೀತಾರಾಮ ಭಟ್ಟರು ಪೂರ್ಣಾವಧಿ ಕಲಾ ವ್ಯವಸಾಯಿ ಆಗದಿದ್ದುದು ಯಕ್ಷಗಾನ ರಂಗಕ್ಕಾದ ಬಹುದೊಡ್ಡ ನಷ್ಟ'' ಎಂದಿದ್ದಾರೆ ಹಿರಿಯ ಯಕ್ಷಗಾನ ಕವಿ, ವಿಮರ್ಶಕ, ಯಕ್ಷಗಾನ ರಂಗತಜ್ಞ, ಭಾಗವತ ಕೆ. ಎಂ. ರಾಘವ ನಂಬಿಯಾರರು.

ಯಕ್ಷಗಾನಕ್ಕೆ ಅಮೋಘವಾದ ಕೊಡುಗೆಯನ್ನು ಕೊಟ್ಟ ಪದ್ಯಾಣ -ಕುರಿಯ ಈ ಎರಡು ಕುಟುಂಬಗಳ ಸಂಬಂಧದಲ್ಲಿ ಟಿಸಿಲೊಡೆದವರು ಸೇರಾಜೆಯವರ ತಾಯಿ ಯಕ್ಷರಂಗದ ಧ್ರುವತಾರೆ ಕುರಿಯ ವಿಠಲ ಶಾಸ್ತ್ರಿಗಳ ಖಾಸಾ ತಂಗಿ. ಸೇರಾಜೆಯವರ ತಂದೆ ಪದ್ಯಾಣ ಕುಟುಂಬದ ಸೇರಾಜೆ ನಾರಾಯಣ ಭಟ್ಟರು ಆ ಕಾಲದ ಬಹುದೊಡ್ಡ ಸಮಾಜ ಸೇವಕ, ಯಕ್ಷಗಾನ ಸಂಘಟಕ; ಅರ್ಥಧಾರಿಗಳೂ ಹೌದು.

ಸೇರಾಜೆ ಸೀತಾರಾಮ ಭಟ್ಟ
ಜನನ : ಒಕ್ಟೋಬರ್ 20, 1948
ಜನನ ಸ್ಥಳ : ಸೇರಾಜೆ, ಕರೋಪಾಡಿ ಗ್ರಾಮ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ

ಕಲಾಸೇವೆ:
ಪದ್ಯಾಣ - ಕುರಿಯ ಕುಟು೦ಬದ ಟಿಸಿಲು ಸೀತಾರಾಮ ಭಟ್ಟರು ಸೌಮ್ಯ ಪಾತ್ರಗಳಿಗೆ ಜೀವ ತು೦ಬಿದ ಕಲಾವಿದ, ಸಮರ್ಥ ಅರ್ಥಧಾರಿ ಹಾಗೂ ವೀರವರ ಶಕ್ರಜಿತು, ವಸುಂಧರಾತ್ಮಜೆ, ದಂಡಧರ ವೈಭವ, ಶತಾಕ್ಷೀ ಸರ್ವಮಂಗಳೆ ಹಾಗೂ ಮಹಾಬಲಿ ಯಾದವೇಂದ್ರ ಎಂಬಿತ್ಯಾದಿ ಪ್ರಸಂಗಗಳನ್ನು ರಚಿಸಿರುತ್ತಾರೆ.
ಪ್ರಶಸ್ತಿಗಳು:
ಹಲವಾರು ಸ೦ಘ-ಸ೦ಸ್ಥೆಗಳಿ೦ದ 200ಕ್ಕೂ ಮಿಕ್ಕಿ ಸನ್ಮಾನ ಹಾಗೂ ಪ್ರಶಸ್ತಿಗಳು

ಸೌಮ್ಯ ಪಾತ್ರಗಳಿಗೆ ಅಗ್ರಗಣ್ಯರು

ಬಾಲ್ಯದಲ್ಲಿ ದೊಡ್ಡ ಅಣ್ಣ ಪದ್ಯಾಣ ತಿರುಮಲೇಶ್ವರ ಭಟ್ಟರ ಪ್ರಭಾವಕ್ಕೆ ಒಳಗಾದ ಸೀತಾರಾಮ ಭಟ್ಟರು ಅನಂತರ ತಮ್ಮ ಮಾವನವರಾದ ಕುರಿಯ ವಿಠಲ ಶಾಸ್ತ್ರಿಗಳಿಂದ ಯಕ್ಷಗಾನ ನಾಟ್ಯವನ್ನು ಅಭ್ಯಾಸ ಮಾಡಿದರು. ಕುರಿಯ ಎಂಬೀ ಮೂರಕ್ಷರ ಯಕ್ಷಗಾನದ ಬೆಳವಣಿಗೆಗೆ ಇತ್ತ ಕೊಡುಗೆ ಅನನ್ಯವಾದುದು. ಕುರಿಯ ವಿಠಲ ಶಾಸ್ತ್ರಿಗಳ ಪ್ರಮುಖ ಶಿಷ್ಯರಲ್ಲಿ ಸೇರಾಜೆಯವರು ಓರ್ವರು. ಧೀರೋದ್ಧತ ಮತ್ತು ಧೀರೋದಾತ್ತ ಪಾತ್ರಗಳನ್ನು ಸುಂದರವಾಗಿ ಮತ್ತು ಯಶಸ್ವಿಯಾಗಿ ನಿರ್ವಹಿಸಬಲ್ಲ ಸಮರ್ಥರು. ಇವರ ಅತಿಕಾಯ, ಅರ್ಜುನ, ದೇವೇಂದ್ರ ಇತ್ಯಾದಿ ಪಾತ್ರಗಳು ಪ್ರಸಿದ್ಧವಾದವುಗಳು.

ಶ್ರೀದೇವೀ ಮಹಾತ್ಮೆಯ ಶ್ರೀದೇವೀ ಪಾತ್ರದಲ್ಲೂ ಇವರು ಪ್ರವೀಣರು. ಭಕ್ತಿರಸಾಭಿವ್ಯಕ್ತಿಯಲ್ಲಿ ನಿಪುಣರು. ಇವರ ಸೌಮ್ಯ ಪಾತ್ರದ ಅರ್ಥಗಳು ತಾಳ ಮದ್ದಳೆ ಗಳಲ್ಲಿ ಗಣನೀಯವಾದ ಪ್ರಭಾವವನ್ನು ಬೀರುತ್ತವೆ. ದೇರಾಜೆ ಸೀತಾರಾಮಯ್ಯನವರ ಪ್ರಭಾವಕ್ಕೆ ಒಳಗಾದ ಇವರಲ್ಲಿ ದೇರಾಜೆಯವರ ಶೈಲಿಯೂ ಶೇಣಿಯವರ ಶೈಲಿಯೂ ಮೇಳೈಸಿವೆ. ಮಂಗಳೂರಿನ ಶ್ರೀ ಮಂಗಳಾದೇವೀ ದೇವಸ್ಥಾನದಲ್ಲಿ ಮತ್ತು ಯೆಯ್ನಾಡಿಯ ಶ್ರೀ ಜಯರಾಮ ಭಜನಾ ಮಂಡಳಿಗಳಲ್ಲಿ ಕಳೆದ 25 ವರ್ಷಗಳಿಂದ ವಾಚನ - ಪ್ರವಚನ ಕಾರ್ಯಕ್ರಮ ಗಳಲ್ಲಿ ಪ್ರವಚನಕಾರರಾಗಿ ಭಾಗವಹಿಸುತ್ತಿರುವ ಇವರು ಪ್ರವಚನದಲ್ಲಿ ಅಗ್ರಗಣ್ಯರು.

ಹುಟ್ಟಿ ಬೆಳೆದ ಪರಿಸರ, ಕುಟುಂಬಸ್ಥರು, ಸಂಬಂಧಿಕರು, ನೆರೆಹೊರೆಯವರು ಎಲ್ಲರೂ ಯಕ್ಷಗಾನಕ್ಕೆ ಸಂಬಂಧಪಟ್ಟವರೇ. ಆದುದರಿಂದಲೋ ಏನೋ ಸೇರಾಜೆಯವರು ತಮ್ಮ ಬಾಲ್ಯವನ್ನು ಚೌಕಿ -ರಂಗಸ್ಥಳಗಳ ಸಂಪರ್ಕದಲ್ಲಿಯೇ ಕಳೆದರು. ತನ್ನ ಅಜ್ಜನ ಮನೆಗೆ ಬರುತ್ತಿದ್ದ ಆ ಕಾಲದ ದೊಡ್ಡ ದೊಡ್ಡ ಕಲಾವಿದರ ಸಂಪರ್ಕವೂ ಸ್ಫೂರ್ತಿಯೂ ಅವರಿಗೆ ದೊರೆಯಿತು.

ಇವೆಲ್ಲದರ ಪರಿಣಾಮ ಸೇರಾಜೆಯವರು ತಮ್ಮ ಎಳವೆಯಲ್ಲಿಯೇ ಒಬ್ಬ ಅರ್ಥಧಾರಿ, ಪಾತ್ರಧಾರಿ, ಸಾಹಿತಿಯಾಗಿ ಗುರುತಿಸಿಕೊಂಡರು. ಕಾನೂನು ಪದವೀಧರರಾದ ಇವರು ತಮ್ಮ ಕಾಲೇಜು ಜೀವನದಲ್ಲಿಯೇ ತಮ್ಮ ಓರಗೆಯವರನ್ನು ಸೇರಿಸಿ ತಂಡ ಕಟ್ಟಿಕೊಂಡು ಯಕ್ಷಗಾನ ಪ್ರದರ್ಶನವನ್ನು ಕೊಟ್ಟು ಮೆಚ್ಚುಗೆಗೆ ಪಾತ್ರರಾದವರು. ಯಕ್ಷಗಾನ ನಾಟ್ಯವನ್ನು ಕುರಿಯ ವಿಠಲ ಶಾಸ್ತ್ರಿಗಳಿಂದ ಕಲಿತ ಸೇರಾಜೆಯವರಿಗೆ ಅರ್ಥಗಾರಿಕೆಗೆ ಶೇಣಿ -ದೇರಾಜೆಯವರೇ ಸ್ಫೂರ್ತಿ. ಕಾಲೇಜು ದಿನಗಳಲ್ಲೇ ಪತ್ರಿಕೆಗಳಿಗೆ ಅಂಕಣಕಾರರಾಗಿದ್ದ ಸೇರಾಜೆಯವರು ಮುಂದೆ ಉದ್ಯೋಗ ನಿಮಿತ್ತ ಬೆಂಗಳೂರಿಗೆ ಹೋದಕಾರಣ ಯಕ್ಷಗಾನ ವ್ಯವಸಾಯಕ್ಕೆ ಕೊಂಚ ತೊಡಕಾಯಿತು.

ಸರ್ವಾಂಗ ಸುಂದರ ಪ್ರಸಂಗ ರಚನೆ

ಬಾಲ್ಯದಲ್ಲಿ ಮನೆಯಲ್ಲಿ ತಾಯಿ ಶಂಕರಿ ಅಮ್ಮನವರಿಂದ ರಾಮಾಯಣ ಮತ್ತು ನಳ ಚರಿತ್ರೆಗಳನ್ನು ಕಲಿತ ಇವರಿಗೆ ತಾಯಿಯವರು ಪ್ರತಿನಿತ್ಯವೂ ಸಾಯಂಕಾಲ ನಡೆಸುತ್ತಿದ್ದ ಕುಮಾರವ್ಯಾಸ ಭಾರತ ವಾಚನವು ಗಾಢವಾದ ಪ್ರಭಾವವನ್ನು ಬೀರಿದೆ. ಇವರ ಭಾವನವರಾದ ವೇಷಧಾರಿ ಪೆರ್ವೋಡಿ ನಾರಾಯಣ ಭಟ್ಟರ ನೇತೃತ್ವ ಮತ್ತು ಸಂಘಟನೆಯ ಶ್ರೀ ಕುರಿಯ ವಿಠಲ ಶಾಸ್ತ್ರಿ ಶಿಷ್ಯವೃಂದದ ಸದಸ್ಯರಾಗಿ ಅದರ ಕಾರ್ಯಕ್ರಮಗಳಲ್ಲೆಲ್ಲ ವೇಷಧಾರಿಯಾಗಿ ಭಾಗವಹಿಸಿದವರಿವರು. ಸೇರಾಜೆಯವರ ಐದು ಪ್ರಸಂಗಗಳ "ಯಕ್ಷಗಾನ ಪ್ರಸಂಗ ಪಂಚಕ'ವು ಮುದ್ರಣವಾಗಿದೆ. ಶ್ರೀಮದ್ಭಗವದ್ಗೀತೆಯನ್ನು ಕನ್ನಡ ಭಾಮಿನೀ ಷಟ್ಪದಿಯಲ್ಲಿ ರಚಿಸಿ ಪ್ರಕಟಿಸಿದ್ದಾರೆ.

ಆಗ ಶುರುವಾದದ್ದು ಯಕ್ಷಗಾನ ಪ್ರಸಂಗ ರಚನೆಯ ಕಾಯಕ. ವೀರವರ ಶಕ್ರಜಿತು, ವಸುಂಧರಾತ್ಮಜೆ, ದಂಡಧರ ವೈಭವ, ಶತಾಕ್ಷೀ ಸರ್ವಮಂಗಳೆ ಹಾಗೂ ಮಹಾಬಲಿ ಯಾದವೇಂದ್ರ ಎಂಬಿತ್ಯಾದಿ ಪ್ರಸಂಗಗಳನ್ನು ರಚಿಸಿದರು. ಸೀತಾರಾಮ ಭಟ್ಟರ ಪ್ರಸಂಗಗಳ ಪದ್ಯಗಳಲ್ಲಿ ಯಕ್ಷಬ್ರಹ್ಮ ಅಗರಿಯವರ ಪ್ರಭಾವವನ್ನು ಗುರುತಿಸಬಹುದಾಗಿದೆ. ರಾಗತಾಳಗಳ ಖಚಿತತೆ ಹಾಗೂ ಸಾಹಿತ್ಯ ಛಂದಸ್ಸುಗಳ ಹೊಂದಾಣಿಕೆಯಲ್ಲಿ ಈ ಎಲ್ಲ ಪ್ರಸಂಗಗಳೂ ಸರ್ವಾಂಗ ಸುಂದರವಾಗಿವೆ.



****************




ಕೃಪೆ : udayavani , udayavani


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ